Monday, July 29, 2013

ಸುಮ್ನೇ ಒಂದು..





'ಥೋ, ಅದು ಹೊಟ್ಟಲೇ ಇಲ್ಲ ಕಣಲೇ ಆ ಪಟಾಕಿ' ಮಂಟ್ರ ಗ್ಯಾಬ್ರನ ಹತ್ತಿರ ದೂರಿದ.. 'ಇನ್ನೂ ಒಣಗ್ಸು ಹೇಳಿ ಬಡ್ಕಂಡೆ ಮಗ್ನೆ' ಗ್ಯಾಬ್ರ ಅಲವತ್ತುಕೊಂಡ. ರಸ್ತೆ ಮೇಲೆ ಒಣಗಿ ಬಿದ್ದಿದ್ದ ಸಗಣಿ ಉಂಡೆ ಮೇಲೆ ಕೆಂಪು ಟೈಗರ್ ಪಟಾಕಿಯೊಂದು ಟುಸ್ಸ್ ಗುಟ್ಟಿ ಜುಟ್ಟು ಸುಟ್ಟ ತಲೆಯಿಂದ ಸಣ್ಣಗೆ ಹೊಗೆಯ ಒರತೆ ಸೂಸುತ್ತಿತ್ತು. ಅವರ ಆವತ್ತಿನ ಮಿಕ ಆಗಬೇಕಿದ್ದ ಹನ್ಯ ಇವರ ಕಣ್ಣೆದುರಿಗೇ ಶಿಳ್ಳೆ ಹೊಡೀತಾ ಸೈಕಲ್ ತುಳ್ಕಂಡ್ ಡೇರಿಯಿಂದ ಮನೆಗ್ ಹೋದ..



ಜಿದ್ದು ಹುಟ್ಟಿದ್ದು ಶಾಲೆಯಲ್ಲಿ.. ಹನ್ಯ ಒಂದು ವರ್ಷಕ್ಕೆ ಸೀನಿಯರ್.. ಆದ್ರೂ ನಾಲಕ್ನೇ ಕ್ಲಾಸ್ ಅದೇನು ಇಷ್ಟಾ ಆಯ್ತೋ ಗೊತ್ತಿಲ್ಲ ಮುಂದೆ ಹೋಗೋ ಮನಸ್ಸು ಮಾಡಿಲ್ಲ.. ಹೇಳಿ ಕೇಳಿ ಸೀನ್ಯರ್ರು.. ಮೇಲಿಂದ ಇವ್ರಿಬ್ರಿಗಿಂತ ನಾಲ್ಕಿಂಚು ಜಾಸ್ತಿನೇ ದಪ್ಪ ಇದ್ದ.. ಇವರೋ ಪೀಚಲುಗಳು! ಬೆಕ್ಕಾಗಿದ್ದ ಹನ್ಯಂಗೆ ಒಂದಿವ್ಸ ಮಂಟ್ರ ಇಲಿಯಾದ್ರೆ ಇನ್ನೊಂದಿವ್ಸ ಗ್ಯಾಬ್ರ.. ಬೆಕ್ಕಿಗೆ ಗಂಟೆ ಕಟ್ಟೋ ಪ್ರೊಗ್ರಾಮ್ ಇಟ್ಕೊಳ್ದೆ ಡೈರೆಕ್ಟಾಗಿ ಸಗಣಿ ತಿನ್ಸಕ್ ರೆಡಿಯಾಗಿದ್ರು ದೊಸ್ತಿಗಳಿಬ್ರೂ!



ಆದ್ರೆ ಅನ್ಕಂಡಿದ್ದೆಲ್ಲ ಆಗ್ಬೇಕಲ್ಲ? 'ಲೇ, ಹನ್ಯ ನೋಡಲಿಲ್ಲ ತಾನೇ ಪಟಾಕಿನ? ಅವ್ನಿಗೆನಾರಾ ಗೊತ್ತಾದ್ರೆ ಅಷ್ಟೇ ನಮ್ ಕಥೆ ನಾಳೆ ಶಾಲೆಲ್ಲಿ' ಸ್ವಗತದ ಮೆಲು ದನಿಯಲ್ಲಿ ಗ್ಯಾಬ್ರ ಮಂಟ್ರನ ಹತ್ತಿರ ಹೇಳ್ದ.. 'ಗೊತ್ತಾಗಿರಕಿಲ್ಲ ಬಿಡು, ಇಲ್ದಿದ್ರೆ ಇಲ್ಲೇ ವಿಚಾರ್ಸಿರೋನು ನನ್ಮಗ' ಮಂಟ್ರ ಸ್ವ-ಸಮಾಧಾನ ಪಟ್ಕೊಂಡ.. ಇಬ್ರ ಮುಖಾನೂ ಹಾಗಲಕಾಯಿ ತಿನ್ಸಿ ಹರಳೆಣ್ಣೆ ಕುಡಸ್ದಂಗಾಗಿತ್ತು..


ತುಂಡಾಲೋಚ್ನೆಗಳ ಸಾವಾಸ!



-   ಗೊಬ್ಬರ, ಹೆಂಡ ಜಾಸ್ತಿ ಕೊಳೆತ ಹಂಗೆ ರೇಟ್ ಜಾಸ್ತಿ.. ಅದೇ ತರ ನಮ್ಮ ಯೋಚನೆ ಜಾಸ್ತಿ ಹೊಲಸಾದಂಗೂ ಡಿಮ್ಯಾಂಡ್ ಜಾಸ್ತಿ!


-   ಎರಡು ಒಳ್ಳೇ ಹಲ್ಲುಗಳ ಮಧ್ಯ ಒಂದು ಹುಳುಕು ಹಲ್ಲಿದ್ರೆ ಉಳ್ದವೆರಡು ಹಾಳಾಗ್ದೇ ಇರಲಿ ಅಂತ ಜಾಸ್ತಿನೇ ಕಾಳಜಿ ತೋರಸ್ತೀವಿ.. ಅದೇ ಆ ಹಲ್ಲನ್ನ ಕಿತ್ತಾದ್ಮೇಲೆ? ಹಂಗೇ ನಮ್ಮಂತವ್ರು ನಿಮ್ಮ ಮಧ್ಯೆ ಇರೋದಕ್ಕೇ ನಿಮ್ಗೆ ಮೆರಗು ಜಾಸ್ತಿ!


-   ನಮ್ಮ ಕಲೀಗೊಬ್ರು ನಾನ್ ಯಾವಾಗ್ಲೂ ಕಿವಿಗೆ ಪ್ಲಗಿನ್ ಮಾಡ್ಕೊಂಡು ಹಾಡು ಕೇಳೋದ್ ನೋಡಿ 'ಅಷ್ಟೆಲ್ಲ ಅಡಿಕ್ಷನ್ ಒಳ್ಳೇದಲ್ರೀ' ಅಂದವ್ರು 'ಇರಿ, ಒಂದು ಸಿಗ್ರೇಟ್ ಸೇದ್ ಬರ್ತೀನಿ' ಅಂದ್ರು!!


-  ಅದೇನೋ ಗೊತ್ತಿಲ್ರಿ, ಹುಡ್ಗೀರ್ ಜೊತೆ ಜಗಳ ಆಡೋವಾಗ ಸೋತು ಫೋನಿಟ್ಮೇಲೇ ಒಳ್ಳೊಳ್ಳೆ ಡೈಲಾಗುಗಳು ನೆನ್ಪಾಗ್ತಾವೆ, ಥತ್ ಇಸ್ಕಿ!


-  ನೆನ್ನೆ ನಿನ್ನ ನೋಡ್ದಾಗ ನೀನು ನಾಚ್ಕೊಂಡಿದ್ದೆ; ಇವತ್ತು ನಿನ್ನ ನೋಡೋಕೇ ನಂಗೆ ನಾಚ್ಕೆ ಆಗ್ತಿದೆ! 'ಮಾತು ಆಡಿದ್ರೆ ಹೋಯ್ತು' ಅನ್ನೋದು ಇದಕ್ಕೇ ಇರ್ಬೇಕು!


-  ಕೆಲವೊಮ್ಮೆ ಹಾಡಿನ ಸಾಹಿತ್ಯಕ್ಕಿಂತ ಹಿಂದಿನ ಆಲಾಪಾನೇ ಹಿಡಿಸಿಬಿಡುತ್ತೆ; ಇವತ್ಯಾಕೋ ನಿನ್ ಗೆಳತೀನೇ ಚೆನ್ನಾಗಿ ಕಾಣ್ತಿದ್ಳು!


-  ಪಾಸ್ಪೋರ್ಟ್ ಇಲ್ಲಾಂತ ಗೊತ್ತಿದ್ರೂ ನಿದ್ರೆಲ್ಲಿ ಅಮೇರಿಕಾ ಕನಸು ಬೀಳೂದಿಲ್ವೇ?!


-  ಊರಾಚೆ ಹೋಗೋಕೆ ಕಾರೇ ಬೇಕು, ಪೆಟ್ರೋಲ್ ಹಾಕ್ಸದು ಅಂದ್ರೆ ಆಗಲ್ಲ.. ಏನ್ಮಾಡಣ ಸಾಮಿ ನಾವು?!


-  ಫುಲ್ ಪಾರ್ಟಿ ಮಾಡನ ಅಂದ್ಕೊಂಡು ಶಾಂತಿ ಸಾಗರಕ್ಕೆ ಹೋದಂಗಾಯ್ತು!

Friday, July 19, 2013

ಬರಬೇಡ ಮತ್ತೊಮ್ಮೆ........














ಬರಬೇಡ ಮತ್ತೊಮ್ಮೆ ದೂರ ಹೋಗಿಹೆ ನೀನು
ಮತ್ತೆ ಬರಬೇಡ..

ಬರಬೇಡ ಮತ್ತೊಮ್ಮೆ ಕನಸಾಗಿ ನೀನು
ಈಗಷ್ಟೇ ಕನಸ ಕೊಲ್ಲಲು ಕಲಿತಿರುವೆ..

ಬರಬೇಡ ಮತ್ತೊಮ್ಮೆ ನೆನಪಾಗಿ ನೀನು
ಈಗಷ್ಟೇ ನೆನಪ ಮರೆಯಲು ಕಲಿತಿರುವೆ..

ಬರಬೇಡ ಮತ್ತೊಮ್ಮೆ ನೆಪವಾಗಿ ನೀನು
ಈಗಷ್ಟೇ ನೆಪವ ಒರೆಸಲು ಕಲಿತಿರುವೆ..

ಬರಬೇಡ ಮತ್ತೊಮ್ಮೆ ತಾಪವಾಗಿ ನೀನು 
ಈಗಷ್ಟೇ ಮನಸ ತಣಿಸಲು ಕಲಿತಿರುವೆ..

ಬರಬೇಡ ಮತ್ತೊಮ್ಮೆ ಕೋಪವಾಗಿ ನೀನು
ಈಗಷ್ಟೇ ಸ್ವಲ್ಪ ಸಮಾಧಾನ ಕಲಿತಿರುವೆ..

ಬರಬೇಡ ಮತ್ತೊಮ್ಮೆ ಅಳುವಾಗಿ ನೀನು 
ಈಗಷ್ಟೇ ಚೂರು ನಗಲು ಕಲಿತಿರುವೆ..

ಬರಬೇಡ ಮತ್ತೊಮ್ಮೆ ಆಳವಾಗಿ ನೀನು 
ಈಗಷ್ಟೇ ಚೂರು ಮೇಲೇರ ಕಲಿತಿರುವೆ.. 

ಬರಬೇಡ ಹೊಸ ದಾಳವಾಗಿ ನೀನು 
ಈಗಷ್ಟೇ ಕೊಂಚ ಆಡಲು ಕಲಿತಿರುವೆ..

ಬರಬೇಡ ಬಿರುಗಾಳಿಯಾಗಿ ನೀನು
ಈಗಷ್ಟೇ ನೇರ ನಿಲ್ಲಲು ಕಲಿತಿರುವೆ..

ಬರಬೇಡ ಹೀಗೆ ಮೌನವಾಗಿ ನೀನು
ಈಗಷ್ಟೇ ಎರಡು ಮಾತು ನಾ ಕಲಿತಿರುವೆ..

ಬರಬೇಡ ಹೀಗೆ ಹಿಂದೆಯೇ ನೀನು
ಈಗಷ್ಟೇ ಒಂಚೂರು ಮುನ್ನುಗ್ಗ ಕಲಿತಿರುವೆ.. 



ಬರಬೇಡ ಮತ್ತೊಮ್ಮೆ ದೂರ ಹೋಗಿಹೆ ನೀನು; ಮತ್ತೆ ಬರಬೇಡ.. 

ಬರಬೇಡ ಮತ್ತೊಮ್ಮೆ ದೂರವಾಗಿಹೆ ನೀನು; ಮತ್ತೆ ಬರಬೇಡ.. 




Wednesday, July 10, 2013

ಕನಸ ಗೀಳು!

ಸರಿ ತಪ್ಪು ಗೊತ್ತಿರಲಿಲ್ಲ ಹಚ್ಚಿಕೊಂಡಾಗಿತ್ತು..
ಅವಳ ಮಾತಿನ ಧಾಟಿಯ ಮನ ಮೆಚ್ಚಿಕೊಂಡಾಗಿತ್ತು..

ನೋಡದ ಆ ಮುಖವ ಕಲ್ಪನೆ ಮಾಡಿಕೊಂಡಾಗಿತ್ತು..
ಒಂದೊಳ್ಳೇ ಹಾಡನು ಒಳಗೊಳಗೇ ಹಾಡಿಕೊಂಡಾಗಿತ್ತು..

ಭಾವನಾ ಲೋಕದ ಏಕಪಥ ಚಲನೆ ಶುರುಮಾಡಿಕೊಂಡಾಗಿತ್ತು..    
ಇಲ್ಲದ ನಾಳೆಯ ಹುಸಿ ನಂಬಿಕೆಗಳ ಹೃದಯ ಬೆಳೆಸಿಕೊಂಡಾಗಿತ್ತು..      

ಕನಸು ಚೂರಾದಾಗ ರೈಲ ಪಠರಿಯೊಂದು ಕಳಚಿದಂಗಾಗಿತ್ತು..
ತೋಲನ ತಪ್ಪಿ ಯೋಚನೆ ಎಲ್ಲೆಲ್ಲೋ ಓಡಿತ್ತು..

ಇಂದೇಕೋ ಕೂತೆಲ್ಲವ ಬರೆವಂತೆನಿಸಿತ್ತು..
ಸದ್ದಿಲ್ಲದೇ ಹೊಸ ಕನಸೊಂದು ನಾಳೆಗೆ ಹೊಂಚು ಹಾಕಿತ್ತು..

ತೊದಲು ವೇದನೆ; ಮನದ ನಿವೇದನೆ!

ಇವಳು ನನ್ನವಳೆಂಬ ಬಲವಾದ ಯೋಚನೆ
ಮೂಡಿತ್ತು ಆ ದಿನ ನೀ ಕೊಟ್ಟಾಗ ಸೂಚನೆ
ಶುರುವಾಯ್ತು ಅಂದಿಂದ ಹಿತವಾದ ಯಾತನೆ
ಮೂಡಿತ್ತು ಕಿರುನಗು ತುಟಿಯಲ್ಲಿ ತಂತಾನೆ

ನೀನಿಟ್ಟ ನೋಟ ಮಾಡಿತ್ತು ಗಾಯ
ನೆಟ್ಟಗೆಯೇ ನಿಂತಿದ್ದರೂ ನಾ ತಪ್ಪಿದ್ದೆ ಆಯ
ಅಲ್ಲೆಯೇ ತಿವಿದಿತ್ತು ಸಣ್ಣದೊಂದು ಭಯ
ಸಿಕ್ಕಿಯೂ ಸಿಗದಿರೆ ಈ ಒಲವಿನ ಜಯ?

ಕಟ್ಟಿತ್ತು ಮನಸು ನೂರಾರು ಕನಸು
ನಕ್ಕಿತ್ತು ಭಾವಿತ್ತು ತುಸುದೂರ ನಿಂತು
ಅದು ಹೂಡಿದ್ದ ಸಂಚು ನನಗೆಲ್ಲಿ ತಿಳಿದಿತ್ತು
ಇನ್ನೂ ಶುರುವಾಗದ ಆಟ ಹಾಗೆಯೇ ಮುಗಿವಂತಿತ್ತು!

ಗೆಳತಿ, ಇದು ನನ್ನ ಕೊನೆಯ ಇರುಳು
ಆದರೂ ಯಾಕೋ ಅರ್ಧ ಚಂದಿರ ಮಾಡುತಿರುವ ಈ ಬಾಳ ಮರುಳು
ಅವನ ಬೆಳಕನಷ್ಟೇ ನಿನಗೆ ಧಾರೆಯೆರೆಯಬೇಕೆಂಬ ಪುಟ್ಟ ಹಂಬಲ
ನಿನಗೆ ಕಾಣದಿರಲಿ ಕಲೆಯಾದ ಅವನ ಗಲ್ಲ

ಬೇವು ನನಗಿರಲಿ ಸವಿ ನೀನು ಬೆಲ್ಲ
ನನ್ನ ಕೊನೆವೇದನೆ ಜೀವನಕೆ ಸಲ್ಲ!


(ಸ್ನೇಹಿತರೊಬ್ಬರು ಕೊಟ್ಟ ಸನ್ನಿವೇಶಕ್ಕೆ ಬರೆಯುವ ಪ್ರಯತ್ನ)

Tuesday, July 9, 2013

ಚೂರೇ ಮಳೆ ಬಂದು ಉಂಟಾದ ಹಬೆಯಂತಾಯಿತು ಐದೇ ನಿಮಿಶದಲಿ ನಿನ್ನೊಡನೆ ಮಾತು ಮುಗಿದಾಗ.. 
ಇನ್ನೊಮ್ಮೆ ಫೋನಾಯಿಸು ಹೇಳುವುದೇನೋ ಮರೆತಂತೆ, ಮಾತಿನ ಧಾರೆಯಲಿ ಮೀಸಿ ತಣಿಸಿಕೊಳ್ಳುವೆ ಮನಸನ್ನ..

Monday, July 8, 2013

ಹೀಗೇ ಸುಮ್ಮನೆ. . .

ಯಾವಾಗಲೂ ಅರ್ಥವಿರುವುದನ್ನೇ ಉಸುರಬೇಕೇ? ಅಪರೂಪಕ್ಕೊಮ್ಮೆ ಏನೋ ಒಂದನ್ನು ಹಲುಬಿ ನಂತರ ಅದಕ್ಕೊಂದು ಅರ್ಥ ಕೊಟ್ಟರೆ ನಡೆಯುವುದಿಲ್ಲವೇ?

- ಸುಮ್ನೇ ಅನ್ಸಿದ್ದು..

Sunday, July 7, 2013

ಮಳೆ ಮೊಬೈಲ್; ಬೆಟ್ಟ ಸಿಗ್ನಲ್!

ಮಳೆಯಲ್ಲಿ ನೆನೆದ ಮಣ್ಣ ವಾಸನೆ ಯಾವತ್ತೂ ಕಾಡಿದ ಹಿತ.. ಒಂದೊಳ್ಳೆ ಮಧ್ಯಾಹ್ನದ ನಿದ್ರೆಯಿಂದೆದ್ದಾಗ ಈ ವಾಸನೆ ಸೂಸಿದರೆ ಆ ಆಹ್ಲಾದದ ಅನುಭವವೇ ವಿಶೇಷ.. ಹಾಗೆಯೇ ಎದ್ದು ಒಂಚೂರು ಚಹಾ ಕುಡಿದು, ಜೇಬಲ್ಲಿ ಜಂಗಮವಾಣಿಯಿಳಿಸಿ, ಕೈಗೆ ಸಿಕ್ಕ ಒಂದು ಕರಿ ಕೊಡೆ ಹೆಗಲಿಗೇರಿಸಿ ಮನೆ ಪಕ್ಕದಲ್ಲೇ ಹಾದು ಹೋಗುವ ಆ, ಕಾಲುದಾರಿಗಿಂತಲೂ ಚೂರು ದೊಡ್ಡ ರಸ್ತೆಯಲ್ಲಿ ಬೆಟ್ಟದ ಆ 'ಸಿಗ್ನಲ್' ದೊರೆವ ಜಾಗವ ಗುರಿಯಾಗಿರಿಸಿ ಹೊರಡುವಲ್ಲೂ ಒಂದು ರೀತಿಯ ಸಂಭ್ರಮ.. ಮೊದಮೊದಲು ಅಮ್ಮ 'ದಿನಾಲೂ ಆ ಮೊಬೈಲ್ ಹಿಡಿದು ಹೊಗೋ ಅವಶ್ಯಕತೆ ಏನಿದೆ ಮಾರಾಯ' ಎಂದು ಕೇಳುತ್ತಿದ್ದಳು.. ಈಗ ಬೇಸತ್ತು ಕೇಳುವುದಿಲ್ಲ. ಏನಿದ್ದರೂ ಒಂದು ಹತಾಶೆಯ ನಗಯೊಂದಿಗೆ 'ಬೇಗ ವಾಪಸ್ ಬಾ' ಎನ್ನುವುದಷ್ಟೇ!

ದಾರಿಯಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ನೀರ ಹೊಂಡ.. ಅದರಲ್ಲಿ ಹಾರಿ ಈಜಿ ಸುಖಿಸುವ ಅದ್ಯಾವುದೋ ಸಣ್ಣ ಕೀಟ, ಹೆಸರು ಇಂದಿಗೂ ಗೊತ್ತಿಲ್ಲ! ರಸ್ತೆಯ ಇಬ್ಬದಿಗೂ ಮಳೆಗಾಲದ ವಿಶೇಷ ಹಸಿರು ಹುಲ್ಲುಗಳು.. ದೂರದವರೆಗೂ ಹರಡಿರುವ ಈ ಬಣ್ಣವ ನೋಡುವುದೇ ಒಂಥರಾ ಆನಂದ.. ಹಾಗೆಯೇ ಮೊಬೈಲ್ ಕ್ಯಾಮೆರಾದಲ್ಲಿ ಒಮ್ಮೆ ಕ್ಲಿಕ್ಕಿಸಿ ನೋಡಿ 'ಓಹ್! ಡಿಎಸ್ಎಲ್ಆರ್ ಇದ್ದಿದ್ದರೆ ಕಥೇಯೇ ಬೇರೆ' ಎಂದು ಮನದಲ್ಲೇ ಲೆಕ್ಕ ಹಾಕಿ, 'ಈ ಬಾರಿ ಒಂದ ಖರೀದಿಸಲೇ ಬೇಕು' ಎಂದು ನಿರ್ಣಯಿಸಿದ ನಂತರವೇ ಮುಂದುವರೆವ ಪಯಣ..
                             
ನಾ ಗುರಿಯಾಗಿರಿಸಿದ 'ಸಿಗ್ನಲ್' ತಾಣ ಇದ್ದಿದ್ದು ಯಾರದೋ ಮನೆ ಬೆಟ್ಟದಲಿ.. ಅಲ್ಲಿ ಹೋಗುವ ಮೊದಲು ಇನ್ಯಾರದೋ ಮನೆ ಬೆಟ್ಟ ನುಗ್ಗಿ ದಾಟಿ ಕಳೆಯಬೇಕು.. ಆದರದು ಸುಲಭಸಾಧ್ಯ ಕೆಲಸವಲ್ಲ.. ದನ ನುಗ್ಗಕೂಡದೆಂದು ಆ ಬೆಟ್ಟದ ಸುತ್ತ ಬೇಲಿ, ಮಧ್ಯಕ್ಕೊಂದು ಮುಳ್ಳಿನ ಗೇಟು, ಸಾಲದ್ದಕ್ಕೆ ಕಾಲುವೆ ದಾಟುವ ಸಂಕ ಕೂಡಾ ಮಾಯ! ಜಾರದಂತೆ ಕಾಲುವೆ ಹಾರಿ, ತರಚದಂತೆ ಗೇಟನು ಸರಿಸಿ, ಓಳ ನುಗ್ಗಿ ಮತ್ತೆ ತಿಳಿಯದಂತೆ ಮುಳ್ಳನು ಮುಚ್ಚುವಲ್ಲಿ ಏನೋ ಧನ್ಯತೆ!

ಮುಂದೆ ಪಾಚಿ ಕಟ್ಟಿದ ಕಾಲುದಾರಿಯಲ್ಲಿ ನಡೆವಾಗ ಅಲ್ಲೊಮ್ಮೆ ಇಲ್ಲೊಮ್ಮೆ ಜಾರಿ ಇನ್ನೊಮ್ಮೆ ಬಿದ್ದೂ ಆಗಿ ಅತ್ತಿತ್ತ ನೋಡಿ ಗಮನಿಸಲು ಯಾರೂ ಇಲ್ಲವೆಂದರಿತು ಹಾಗೆಯೇ ಮುನ್ನುಗ್ಗುವಾಗ ಕಿಸೆಯಲ್ಲಿ ಮಲಗಿದ್ದ ಮೊಬೈಲ್ ಒಮ್ಮೆಲೇ ಎಚ್ಚರವಾಗಿ ಕಂಪಿಸುವುದು.. 'ಓಹ್! ಏನಿವತ್ತು ಸಿಗ್ನಲ್ ಇಲ್ಲೇ ದಯಮಾಡಿಸಿಬಿಟ್ಟಿದೇ? ಹೀಗಿದ್ದರೆ ಅಲ್ಲಂತೊ ಫುಲ್ ನಾಲ್ಕೂ ಕಡ್ಡಿನೂ ಇರಬಹುದು' ಎಂಬ ಆಸೆಯಲಿ, ಬಂದ ಸಂದೇಶ ಯಾರದ್ದಿರಬಹುದೆಂಬ ಕುತೂಹಲದಲ್ಲಿ ನಡೆಯುತ್ತಲೇ ಫೋನ ಕೈಗೆತ್ತಿ ನೋಡಿದರೆ 'ಜಾನಿಯೇ ಪಂಡಿತ್ ಜೀ ಸೇ ಅಪನಾ ಭವಿ.....' ಎಂದು ಮೊದಲ ನಾಲ್ಕೂವರೆ ಶಬ್ಧ ಓದುವಷ್ಟರಲ್ಲೇ ಮೈಯೆಲ್ಲಾ ಉರಿದು ಆ ಕಾಣದ ಪಂಡಿತನ ಭವಿತ್ತನ್ನು ಮನದಲ್ಲೇ ಶಪಿಸಿ ಮುನ್ನಡೆದು ಗುರಿ ತಲುಪುವಲ್ಲಿ ಒಂಥರಾ ನೆಮ್ಮದಿ!


ಮನೆಯಲ್ಲೇ ನೆಟ್ವರ್ಕ್ ಇಲ್ಲವೆಂದು ಮೊದಲಾಗುತ್ತಿದ್ದ ಬೇಸರ ಈಗ ಖಂಡಿತಾ ಇಲ್ಲ.. ಸಿಗ್ನಲ್ ಹುಡುಕಾಟದ ಬೆಟ್ಟದ ಪಯಣದ ಈ ಮಜ ಬೇರೆ ಯಾವ ಬಲ್ಲ?!! :)