ಮಳೆಯಲ್ಲಿ ನೆನೆದ ಮಣ್ಣ ವಾಸನೆ ಯಾವತ್ತೂ ಕಾಡಿದ ಹಿತ.. ಒಂದೊಳ್ಳೆ
ಮಧ್ಯಾಹ್ನದ ನಿದ್ರೆಯಿಂದೆದ್ದಾಗ ಈ ವಾಸನೆ ಸೂಸಿದರೆ ಆ ಆಹ್ಲಾದದ ಅನುಭವವೇ ವಿಶೇಷ..
ಹಾಗೆಯೇ ಎದ್ದು ಒಂಚೂರು ಚಹಾ ಕುಡಿದು, ಜೇಬಲ್ಲಿ ಜಂಗಮವಾಣಿಯಿಳಿಸಿ, ಕೈಗೆ ಸಿಕ್ಕ ಒಂದು
ಕರಿ ಕೊಡೆ ಹೆಗಲಿಗೇರಿಸಿ ಮನೆ ಪಕ್ಕದಲ್ಲೇ ಹಾದು ಹೋಗುವ ಆ, ಕಾಲುದಾರಿಗಿಂತಲೂ ಚೂರು
ದೊಡ್ಡ ರಸ್ತೆಯಲ್ಲಿ ಬೆಟ್ಟದ ಆ 'ಸಿಗ್ನಲ್' ದೊರೆವ ಜಾಗವ ಗುರಿಯಾಗಿರಿಸಿ ಹೊರಡುವಲ್ಲೂ
ಒಂದು ರೀತಿಯ ಸಂಭ್ರಮ.. ಮೊದಮೊದಲು ಅಮ್ಮ 'ದಿನಾಲೂ ಆ ಮೊಬೈಲ್ ಹಿಡಿದು ಹೊಗೋ ಅವಶ್ಯಕತೆ
ಏನಿದೆ ಮಾರಾಯ' ಎಂದು ಕೇಳುತ್ತಿದ್ದಳು.. ಈಗ ಬೇಸತ್ತು ಕೇಳುವುದಿಲ್ಲ. ಏನಿದ್ದರೂ ಒಂದು
ಹತಾಶೆಯ ನಗಯೊಂದಿಗೆ 'ಬೇಗ ವಾಪಸ್ ಬಾ' ಎನ್ನುವುದಷ್ಟೇ!
ದಾರಿಯಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ನೀರ ಹೊಂಡ.. ಅದರಲ್ಲಿ ಹಾರಿ ಈಜಿ ಸುಖಿಸುವ ಅದ್ಯಾವುದೋ ಸಣ್ಣ ಕೀಟ, ಹೆಸರು ಇಂದಿಗೂ ಗೊತ್ತಿಲ್ಲ! ರಸ್ತೆಯ ಇಬ್ಬದಿಗೂ ಮಳೆಗಾಲದ ವಿಶೇಷ ಹಸಿರು ಹುಲ್ಲುಗಳು.. ದೂರದವರೆಗೂ ಹರಡಿರುವ ಈ ಬಣ್ಣವ ನೋಡುವುದೇ ಒಂಥರಾ ಆನಂದ.. ಹಾಗೆಯೇ ಮೊಬೈಲ್ ಕ್ಯಾಮೆರಾದಲ್ಲಿ ಒಮ್ಮೆ ಕ್ಲಿಕ್ಕಿಸಿ ನೋಡಿ 'ಓಹ್! ಡಿಎಸ್ಎಲ್ಆರ್ ಇದ್ದಿದ್ದರೆ ಕಥೇಯೇ ಬೇರೆ' ಎಂದು ಮನದಲ್ಲೇ ಲೆಕ್ಕ ಹಾಕಿ, 'ಈ ಬಾರಿ ಒಂದ ಖರೀದಿಸಲೇ ಬೇಕು' ಎಂದು ನಿರ್ಣಯಿಸಿದ ನಂತರವೇ ಮುಂದುವರೆವ ಪಯಣ..
ನಾ ಗುರಿಯಾಗಿರಿಸಿದ 'ಸಿಗ್ನಲ್' ತಾಣ ಇದ್ದಿದ್ದು ಯಾರದೋ ಮನೆ ಬೆಟ್ಟದಲಿ.. ಅಲ್ಲಿ ಹೋಗುವ ಮೊದಲು ಇನ್ಯಾರದೋ ಮನೆ ಬೆಟ್ಟ ನುಗ್ಗಿ ದಾಟಿ ಕಳೆಯಬೇಕು.. ಆದರದು ಸುಲಭಸಾಧ್ಯ ಕೆಲಸವಲ್ಲ.. ದನ ನುಗ್ಗಕೂಡದೆಂದು ಆ ಬೆಟ್ಟದ ಸುತ್ತ ಬೇಲಿ, ಮಧ್ಯಕ್ಕೊಂದು ಮುಳ್ಳಿನ ಗೇಟು, ಸಾಲದ್ದಕ್ಕೆ ಕಾಲುವೆ ದಾಟುವ ಸಂಕ ಕೂಡಾ ಮಾಯ! ಜಾರದಂತೆ ಕಾಲುವೆ ಹಾರಿ, ತರಚದಂತೆ ಗೇಟನು ಸರಿಸಿ, ಓಳ ನುಗ್ಗಿ ಮತ್ತೆ ತಿಳಿಯದಂತೆ ಮುಳ್ಳನು ಮುಚ್ಚುವಲ್ಲಿ ಏನೋ ಧನ್ಯತೆ!
ಮುಂದೆ ಪಾಚಿ ಕಟ್ಟಿದ ಕಾಲುದಾರಿಯಲ್ಲಿ ನಡೆವಾಗ ಅಲ್ಲೊಮ್ಮೆ ಇಲ್ಲೊಮ್ಮೆ
ಜಾರಿ ಇನ್ನೊಮ್ಮೆ ಬಿದ್ದೂ ಆಗಿ ಅತ್ತಿತ್ತ ನೋಡಿ ಗಮನಿಸಲು ಯಾರೂ ಇಲ್ಲವೆಂದರಿತು ಹಾಗೆಯೇ
ಮುನ್ನುಗ್ಗುವಾಗ ಕಿಸೆಯಲ್ಲಿ ಮಲಗಿದ್ದ ಮೊಬೈಲ್ ಒಮ್ಮೆಲೇ ಎಚ್ಚರವಾಗಿ ಕಂಪಿಸುವುದು..
'ಓಹ್! ಏನಿವತ್ತು ಸಿಗ್ನಲ್ ಇಲ್ಲೇ ದಯಮಾಡಿಸಿಬಿಟ್ಟಿದೇ? ಹೀಗಿದ್ದರೆ ಅಲ್ಲಂತೊ ಫುಲ್
ನಾಲ್ಕೂ ಕಡ್ಡಿನೂ ಇರಬಹುದು' ಎಂಬ ಆಸೆಯಲಿ, ಬಂದ ಸಂದೇಶ ಯಾರದ್ದಿರಬಹುದೆಂಬ
ಕುತೂಹಲದಲ್ಲಿ ನಡೆಯುತ್ತಲೇ ಫೋನ ಕೈಗೆತ್ತಿ ನೋಡಿದರೆ 'ಜಾನಿಯೇ ಪಂಡಿತ್ ಜೀ ಸೇ ಅಪನಾ
ಭವಿ.....' ಎಂದು ಮೊದಲ ನಾಲ್ಕೂವರೆ ಶಬ್ಧ ಓದುವಷ್ಟರಲ್ಲೇ ಮೈಯೆಲ್ಲಾ ಉರಿದು ಆ ಕಾಣದ
ಪಂಡಿತನ ಭವಿತ್ತನ್ನು ಮನದಲ್ಲೇ ಶಪಿಸಿ ಮುನ್ನಡೆದು ಗುರಿ ತಲುಪುವಲ್ಲಿ ಒಂಥರಾ ನೆಮ್ಮದಿ!
ಮನೆಯಲ್ಲೇ ನೆಟ್ವರ್ಕ್ ಇಲ್ಲವೆಂದು ಮೊದಲಾಗುತ್ತಿದ್ದ ಬೇಸರ ಈಗ ಖಂಡಿತಾ ಇಲ್ಲ.. ಸಿಗ್ನಲ್ ಹುಡುಕಾಟದ ಬೆಟ್ಟದ ಪಯಣದ ಈ ಮಜ ಬೇರೆ ಯಾವ ಬಲ್ಲ?!! :)
No comments:
Post a Comment